ಶಿಶುನಾಳ ಶರೀಫರು

(ಶಿಶುನಾಳ ಶರೀಫ ಇಂದ ಪುನರ್ನಿರ್ದೇಶಿತ)
Jump to navigation Jump to search

ಶಿಶುನಾಳ ಶರೀಫರು ತತ್ವಪದಗಳ ರೂವಾರಿ. ದೇವಕಾರ ಮನೆತನದವರು. ಕನ್ನಡದ ಖ್ಯಾತ ಹಾಡುಗಾರ ಶ್ರೀ ಅಶ್ವಥ್ಥರು ಇವರ ಅನೇಕ ರಚನೆಗಳನ್ನು ಹಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಖ್ಯಾತ ಕಲಾವಿದ ರಘು ದೀಕ್ಷಿತ್ ಅವರು ಶಿಶುನಾಳ ಶರೀಫರ ಕೆಲ ಗೀತೆಗಳಿಗೆ ವಿಶೇಷ ಶೈಲಿಯ ಸಂಗೀತ ಸಂಯೋಜನೆ ನೀಡಿ ದೇಶದಾದ್ಯಂತ ಪ್ರಖ್ಯಾತಿ ಪಡೆದಿದ್ದಾರೆ.[೧]

ಪರಿಚಯ

 • ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾಡಿದರು.
 • ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.
 • ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.
 • ಕೊನೆಗೆ ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು.
 • ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ. ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ.

ಶಿಶುನಾಳ ಶರೀಫರ ಕೆಲ ಪ್ರಖ್ಯಾತ ಗೀತೆಗಳು

 1. ಲೋಕದ ಕಾಳಜಿ
 2. ಸ್ನೇಹ ಮಾಡಬೇಕಿಂತವಳ
 3. ಗುಡಿಯ ನೋಡಿರಣ್ಣ ದೇಹದ
 4. ಅಳಬೇಡ ತಂಗಿ ಅಳಬೇಡ
 5. ಕೋಡಗನ ಕೋಳಿ ನುಂಗಿತ್ತಾ ತಂಗಿ, ಕೋಡಗನ ಕೋಳಿ ನುಂಗಿತ್ತಾ! (ಪದ:ಕೆಳಗೆ ಕೊಟ್ಟಿದೆ)
 6. ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
 7. ತರವಲ್ಲ ತಗಿ ನಿನ್ನ ತಂಬೂರಿ ಸ್ವರ, ಬರಿದೆ ಬಾರಿಸದಿರು ತಂಬೂರಿ
 8. ಮೋಹದ ಹೆಂಡತಿ ತೀರಿದ ಬಳಿಕ, ಮಾವನ ಮನೆಯ ಹಂಗಿನ್ಯಾಕೋ?
 9. ಹಾವು ತುಳಿದೇನೆ ಮಾನಿನಿ, ಹಾವು ತುಳಿದೇನೆ
 10. ಸೋರುತಿಹುದು ಮನೆಯ ಮಾಳಿಗಿ, ಅಜ್ಙಾನದಿಂದ
 11. ಎಲ್ಲರಂಥವನಲ್ಲ ನನ್ನ ಗಂಡ, ಬಲ್ಲಿದನು ಪುಂಡ, ಎಲ್ಲರಂಥವನಲ್ಲ ನನ್ನ ಗಂಡ
 12. ಎಂಥಾ ಮೋಜಿನ ಕುದುರಿ, ಹತ್ತಿದಮ್ಯಾಗ ತಿರುಗುವುದು ಹನ್ನೊಂದು

ವಿಶೇಷತೆ

 • ಅವರು ತತ್ವಪದಗಳ ರೂವಾರೀ, ತತ್ವಪದ ಎಂದರೆ ಜೀವನದಲ್ಲಿ ಮನುಷ್ಯ ಜೀವ ಮಾಡುವ ತಪ್ಪುಗಳನ್ನು, ಯೋಚಿಸುವ ರೀತಿಯನ್ನು ಯಾವುದೋ ಒಂದು ಸನ್ನಿವೇಶಕ್ಕೆ ಹೋಲಿಸಿ ಹಾಡಿನಿಂದ ವಿವರಿಸುವುದು. ಆ ಹಾಡನ್ನು ನೇರ ಅರ್ಥದಲ್ಲಿ ಕೇಳಿದರೆ ವಿಚಿತ್ರವೆನಿಸುವುದು ಆದರೆ ಅದರ ತಿರುಳು ಅರಿತು ಜೀವನಕ್ಕೆ ಹೊಲಿಸಿದರೆ ಅದರ ಅರ್ಥ ಹೊರ ಹೊಮ್ಮುವುದು. ಅವರು ಮುಸ್ಲಿಮರಾಗಿದ್ದರೂ ಅವರ ಗುರುಗಳು ಬ್ರಾಹ್ಮಣ ಗೊವಿಂದ ಭಟ್ಟರು.
 • ಅವರ ಗುರು-ಶಿಷ್ಯ ಸಂಬಂಧ ಉತ್ತರ ಕರ್ನಾಟಕದ ಮನೆಮಾತಾಗಿದೆ. ಇವರ ತತ್ವಪದಗಳ ಕೊನೆಯಲ್ಲಿ ಸಾಮಾನ್ಯವಾಗಿ ಶಿಶುನಾಳಧೀಶ ಹಾಗೂ ಗುರು ಗೊವಿಂದರ ಉಲ್ಲೇಖವಿರುತ್ತದೆ. ನವಲಗುಂದದ ನಾಗಲಿಂಗ ಸ್ವಾಮಿಗಳು ಇವರ ಪರಮ ಸ್ನೇಹಿತರು. ಹುಬ್ಬಳ್ಳಿಯ ಸಿದ್ಧಾರೂಢರೂ ಇವರ ಸಮಕಾಲೀನರು.

ಕೋಡಗನ ಕೋಳಿ ನುಂಗಿತ್ತಾ--

 • ಉದಾಹರಣೆಗೆ ಶರೀಫರ ಒಂದು ಒಗಟಿನ ಪದ, ಒಡಪಿನ ಅಥವಾ ಬೆಡಗಿನ ಹಾಡು:
 • ‘ಕೋಡಗನ್ನ ಕೋಳಿ ನುಂಗಿತ್ತಾ’ ಎನ್ನುವ ಪದದಲ್ಲಿ; ಕೋಡಗ ಎಂದರೆ ಮಂಗ-ಮರ್ಕಟ; ಚಂಚಲ ಮನಸ್ಸು. ಕೋಳಿ ಬೆಳಗಿನ ಸೂಚನೆ. ಕೋಳಿ ಕೂಗಿದರೆ ಸೂರ್ಯೋದಯ; ಬೆಳಗಾಗುವುದು ಎಂದರೆ ಜ್ಞಾನೋದಯ. ಅದು ಆದಾಗ ಚಂಚಲ ಮನಸ್ಸು ಅದರಲ್ಲಿ ಕರಗಿಹೋಗುವುದು- ಇದು ಕೋಳಿ ಕೋಡಗನನ್ನು ನುಂಗುವುದು. ವೇದಾಂತದಲ್ಲಿ ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಸೂರ್ಯೋದಯಕ್ಕೆ ಹೋಲಿಸುವರು- ಇಲ್ಲಿ ಸೂರ್ಯೋದಯ ಸೂಚಿಸುವ ಕೋಳಿಗೆ ಹೋಲಿಸಿದೆ ; ಜ್ಞಾನೋದಯವಾದಾಗ ಮನಸ್ಸು ಲಯವಾಗಿ ಹೋಗುವುದು. ಅದು ಕೋಳಿ ಕೋಡಗನನ್ನು ನುಂಗಿದಂತೆ. ಇಲ್ಲಿ ಆ ಪ್ರತಿಮೆ ಉಪಯೋಗಿಸಿ ಹಾಡಿದ್ದಾರೆ. (ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.)
 • ಮುಂದಿನ ಪದ್ಯಗಳೆಲ್ಲಾ ಹೀಗೆ ಚಂಚಲತೆಯನ್ನು ಅಚಲ-ಅವ್ಯಯ ಪರಬ್ರಹ್ಮ ತತ್ವವು ಅರಿವಾದಾಗ ಚಂಚಲತೆ ನಿಲ್ಲುವುದೆಂದು ಅನೇಕ ರೂಪಕದೊಡನೆ ಹಾಡಿದ್ದಾರೆ. ಕೊನೆಯ ಸಾಲು ಗುರು ಗೋವಿಂದರ ಕರುಣೆ ಶರೀಫರ ಅತ್ಮವನ್ನು - ನಾನೆಂಬ ಭಾವವನ್ನು ನುಂಗಿ -ಇಲ್ಲದಂತೆ ಮಾಡಿ ಜ್ಞಾನವನ್ನು ದೊರಕಿಸಿತು- ಎಂಬುದು ತಾತ್ಪರ್ಯ.
 • (ಪಾಠಬೇಧವನ್ನು ಆವರಣದಲ್ಲಿ ತೋರಿಸಿದೆ)

ಕೋಡಗನ ಕೋಳಿ ನುಂಗಿತ್ತಾ|
ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಲಿ ನುಂಗಿತ್ತಾ ತಂಗಿ||೧||
ಕೋಡಗನ ಕೋಳಿ ನುಂಗಿತ್ತಾ||

ಒಳ್ಳು ಒನಕಿಯ ನುಂಗಿ
ಕಲ್ಲು ಗೂಟವ ನುಂಗಿ (ಬೀಸುವ)
ಮೆಲ್ಲಲು ಬಂದ ಮುದುಕಿಯ ನೆಲ್ಲು ನುಂಗಿತ್ತಾ ತಂಗಿ||೨||(ಕುಟ್ಟಲಿಕೆ ಬಂದ ಮುದುಕಿಯ ನೊಣವು)
ಕೋಡಗನ ಕೋಳಿ ನುಂಗಿತ್ತಾ||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲಿರುವ ಅಣ್ಣನನ್ನ ಮಣಿಯು ನುಂಗಿತ್ತಾ ತಂಗಿ||೩||
ಕೋಡಗನ ಕೋಳಿ ನುಂಗಿತ್ತಾ||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ್ತಾ ತಂಗಿ||೪||
ಕೋಡಗನ ಕೋಳಿ ನುಂಗಿತ್ತಾ||

ಗುಡ್ಡ ಗಂವ್ಹರ ನುಂಗಿ (ಗವಿಯನು)
ಗಂವ್ಹರ ಇರಿವೆಯ ನುಂಗಿ
ಗುರುಗೋವಿಂದನ ಪಾದ ನನ್ನನೆ ನುಂಗಿತ್ತಾ ತಂಗಿ||೫||
(ಗೋವಿಂದಗುರುವಿನ ಪಾದ ಆತ್ಮವ ನುಂಗಿತ್ತಾ||೫||)
ಕೋಡಗನ ಕೋಳಿ ನುಂಗಿತ್ತಾ||

.

ಶಿಶುನಾಳ ಶರೀಫರ ಕುರಿತಾದ ಚಲನಚಿತ್ರ

೧೯೯೦ ರಲ್ಲಿ ಟಿ.ಎಸ್.ನಾಗಾಭರಣ ಅವರ ನಿರ್ದೇಶನದಲ್ಲಿ ಸಂತ ಶಿಶುನಾಳ ಶರೀಫ ಚಿತ್ರವು ತೆರೆಕಂಡಿತು. ಕನ್ನಡ ನಟರಾದ ಶ್ರೀಧರ್, ಸಾಹಿತಿಗಳಾದ ಗಿರೀಶ್ ಕಾರ್ನಾಡ್ ಹಾಗೂ ನಟಿ ಸುಮನ್ ರಂಗನಾಥ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ರಾಷ್ಟ್ರೀಯ ಏಕತಾ ಚಿತ್ರವೆಂಬ ಪ್ರಶಸ್ತಿ ಪಡೆಯಿತು.

ನಿಧನ

ತುಂಬು ಜೀವನವನ್ನು ನಡೆಸಿದ ಶರೀಫರ ಮರಣದ ತರುವಾಯ ಅವರ ಅಂತ್ಯಕ್ರಿಯೆಯು ಹಿಂದು ಹಾಗು ಮುಸಲ್ಮಾನ ಭಕ್ತರ ಸಮ್ಮುಖದಲ್ಲಿ ನೆರವೇರಿತು.

 • ಶರೀಫ (ಈ ಪುಟದ ವಿಷಯ ಇದರಲ್ಲಿ ತುಂಬಿದೆ)

ಹೊರಗಿನ ಕೊಂಡಿಗಳು

 • ಶಿಶುನಾಳ ಷರೀಫರ ತತ್ವಪದಗಳ ಸಾಹಿತ್ಯ->[[೧]]
 • ವಿಕಿಸೋರ್ಸ್ನಲ್ಲಿ ದಾಸ ಸಾಹಿತ್ಯ:[[೨]]
 • ಗೋವಿಂದಭಟ್ಟರು ಮತ್ತು ಶರೀಫ:[[೩]]
 • ಯು ಟ್ಯೂಬ್:[[೪]]
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು

The article is a derivative under the Creative Commons Attribution-ShareAlike License. A link to the original article can be found here and attribution parties here. By using this site, you agree to the Terms of Use. Gpedia Ⓡ is a registered trademark of the Cyberajah Pty Ltd.